ಬೆರಿಲಿಯಮ್
ರಾಸಾಯನಿಕ ಧಾತು. ಪರಮಾಣು ಸಂಖ್ಯೆ 4. ಪರಮಾಣು ತೂಕ 9,0122. ಇದೊಂದು ವಿರಳ ಲೋಹ. ನಿಸರ್ಗದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಸಂಯುಕ್ತ ರೂಪದಲ್ಲಿ ಬೆರಿಲ್ (Be3Al2Si6O8) ಮತ್ತು ಹೆಲ್ವೈಟುಗಳಲ್ಲಿ ದೊರೆಯುತ್ತದೆ. ಇದರ ಖನಿಜಗಳು ವಿರಳ. 1797ರಲ್ಲಿ ವ್ಯಾಕಲೆನ್ ಎಂಬ ವಿಜ್ಞಾನಿ ಬೆರಿಲ್ ಎಂಬ ಖನಿಜದಿಂದ ಬೆರಿಲಿಯಾವನ್ನು (BeO) ಪ್ರತ್ಯೇಕಿಸಿದ. 1826ರಲ್ಲಿ ವ್ಹೋಲರ್ ಎಂಬ ವಿಜ್ಞಾನಿ ಬೆರಿಲಿಯಮ್ ಕ್ಲೋರೈಡನ್ನು ಪೊಟ್ಯಾಸಿಯಮಿನೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಬೆರಿಲಿಯಮ್ ಧಾತುವನ್ನು ಪ್ರತ್ಯೇಕಿಸಿದ. 
	ತಯಾರಿಸುವ ವಿಧಾನ: ಸರಿಯಾಗಿ ಹುಡಿಮಾಡಿದ ಬೆರಿಲ್ ಖನಿಜವನ್ನು ಸೋಡಿಯಮ್ ಫ್ಲೂಸಿಲಿಕೇಟ್ ಅಥವಾ ಸೋಡಿಯಮ್ ಹೈಡ್ರೊಜನ್ ಫ್ಲೂರೈಡ್ ಎಂಬ ಸಂಯುಕ್ತದೊಂದಿಗೆ ಮಿಶ್ರಮಾಡಿ 750 C ಗೆ ಕಾಸಿದಾಗ ಸೋಡಿಯಮೌ ಬೆರಿಲಿಯಮ್ ಫ್ಲೂರೈಡ್ (Na2BeF4) ಎಂಬ ಸಂಯುಕ್ತ ದೊರೆಯುತ್ತದೆ. ಇದು ನೀರಿನಲ್ಲಿ ವಿಲೀನಿಸುವುದರಿಂದ ಹೆಚ್ಚಿಗೆ ನೀರು ಹಾಕಿ ಇದರ ದುರ್ಬಲ ದ್ರಾವಣ ತಯಾರಿಸಿ ಸೋಡಿಯಮ್ ಹೈಡ್ರಾಕ್ಸೈಡ್ ಪ್ರಕ್ಷೇಪವಾಗುತ್ತದೆ. ಅದನ್ನು ಸೋಸಿ ಬಂಧ ಘನ ಪದಾರ್ಥವನ್ನು [(Be(OH)2)] ಹೆಚ್ಚಿನ ಉಷ್ಣತೆಯಲ್ಲಿ ಕಾಸಿದರೆ ಬೆರಿಲಿಯಮ್ ಆಕ್ಸೈಡ್ ಉತ್ಪನ್ನವಾಗುತ್ತದೆ. ಇದನ್ನು ಹೈಡ್ರೊಕ್ಲೋರಿಕ್ ಆಮ್ಲದೊಂದಿಗೆ ಮಿಶ್ರಿಸುವುದರಿಂದ ಬರುವ ಬೆರಿಲಿಯಮ್ ಕ್ಲೋರೈಡನ್ನು ಸೋಡಿಯಮ್ ಕ್ಲೋರೈಡ್ ಅಥವಾ ಪೊಟ್ಯಾಸಿಯಮ್ ಕ್ಲೋರೈಡಿನೊಂದಿಗೆ ಮಿಶ್ರಿಸಿ ವಿದ್ಯುತ್ ವಿಭಜನೆಗೆ ಒಳಪಡಿಸುವುದರಿಂದ ಬೆರಿಲಿಯಮ್ ಲೋಹ ಅಗಲ ತೆಳು ಚಕ್ಕೆ ರೂಪದಲ್ಲಿ ದೊರೆಯುತ್ತದೆ. ಇದು ಅಶುದ್ಧ ಬೆರಿಲಿಯಮ್ ಲೋಹ. ಇದನ್ನು ಕಡಿಮೆ ಒತ್ತಡದಲ್ಲಿ ಬಟ್ಟಿ ಇಳಿಸಿದಾಗ ಶುದ್ಧ ಲೋಹ ದೊರೆಯುತ್ತದೆ. 

	ಗುಣಧರ್ಮಗಳು: ಬೆಳ್ಳಿಯಂತೆ ಬಿಳಿ. ಹೊಳೆಯುವ ಹಗುರ ಲೋಹ. ಕಡಿಮೆ ಸಾಂದ್ರತೆ (1.8). ಉತ್ತಮ ಉಷ್ಣ ಹಾಗೂ ವಿದ್ಯುದ್ವಾಹಕ. ದ್ರವನ ಬಿಂದು 1300ಔಅ .

	ರಾಸಾಯನಿಕ ಗುಣಗಳು: ಮ್ಯಾಗ್ನೀಸಿಯಮ್ ಮತ್ತು ಅಲ್ಯೂಮಿನಿಯಂ ಲೋಹಗಳನ್ನು ಬಹಳವಾಗಿ ಹೋಲುತ್ತದೆ. ಮ್ಯಾಗ್ನೀಸಿಯಮ್ ಅಲ್ಯೂಮಿನಿಯಮ್‍ಗಳಿಗಿಂತ ಅಧಿಕ ಕ್ಷಾರವಾಗಿದೆ. ಕಡಿಮೆ ಉಷúತೆಯಲ್ಲಿ ಉತ್ಕರ್ಷಣವನ್ನು ವಿರೋಧಿಸುತ್ತದೆ. ಆದರೆ ಅಧಿಕ ಉಷ್ಣತೆಯಲ್ಲಿ ಉತ್ಕರ್ಷಣೆಯಾಗಿ ಆಕ್ಸೈಡಿನ ಒಂದು ಕವಚವೂ ಏರ್ಪಟ್ಟು ಮುಂದೆ ಉತ್ಕರ್ಷಣೆ ಆಗುವುದಿಲ್ಲ. ಎಲ್ಲ ಆಮ್ಲಗಳೊಡನೆ ರಾಸಾಯನಿಕ ಕ್ರಿಯೆ ಹೊಂದುತ್ತದೆ. ಹ್ಯಾಲೊಜನ್ನುಗಳು ಮತ್ತು ಅವುಗಳ ಹೈಡ್ರೊಜನ್ ಆಮ್ಲಗಳನ್ನು ಬೆರಿಲಿಯಮ್ಮಿನೊಂದಿಗೆ ಕಾಸಿದರೆ ನೇರವಾಗಿ ರಾಸಾಯನಿಕ ಕ್ರಿಯೆಯಾಗುತ್ತದೆ. ನೈಟ್ರೊಜನ್ ಮತ್ತು ಕಾರ್ಬನ್ನುಗಳೊಂದಿಗೆ ಬೆರಿಲಿಯಮ್ಮನ್ನು 1200 ಆಥವಾ ಅಧಿಕ ಉಷ್ಣತೆಯಲ್ಲಿ ಕಾಸಿದರೆ ರಾಸಾಯನಿಕ ಕ್ರಿಯೆಯಾಗಿ ಬೆರಿಲಿಯಮ್ ನೈಟ್ರೈಡ್ ಮತ್ತು ಬೆರಿಲಿಯಮ್ ಕಾರ್ಬೈಡ್ ಸಂಯುಕ್ತಗಳು ಉತ್ಪನ್ನವಾಗುತ್ತವೆ. 

	ಉಪಯೋಗಗಳು: ಎಕ್ಸ್‍ಕಿರಣ ನಳಿಕೆಯ ಗವಾಕಗಳ ತಯಾರಿಕೆ, ನ್ಯೂಟ್ರಾನುಗಳ ಉತ್ಪಾದನೆ ಮತ್ತು ಅವುಗಳ ವೇಗದ ಮಂದನ, ಪರಮಾಣು ರಿಯಾಕ್ಟರುಗಳು ಮತ್ತು ಸಂದೀಪ್ತ ದೀಪಗಳು, ಬೇರೆ ಬೇರೆ ತರದ ಸ್ಪ್ರಿಂಗುಗಳ ತಯಾರಿಕೆ, ವಿಮಾನ ತಯಾರಿಕೆ ಇತ್ಯಾದಿ. 										
(ಎಲ್.ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ